ಸಂದಿಗ್ಢದ ನೆರಳಿನಲ್ಲಿ ಭಾರತ :
- ಪ್ರೊ.ಅಭಿನಂದನ ಬಳ್ಳಾರಿ
ಬದುಕಿನಲ್ಲಿ ನಾವು ಮಾಡುತ್ತಿರುವುದೆಲ್ಲವೂ ಆನಂದದ ಗುರಿಯೆಡೆಗೆ ಎಂದು ನಾವು ತಿಳಿದಾಗ ಬದುಕು ಆನಂದ ಹುಟ್ಟುಹಾಕುವ ಉದ್ಯಮವೋ ಎನೋ ಎಂದೆನಿಸುತ್ತದೆ. ಜೀವನವು ಆನಂದವನ್ನು ಅನ್ವೇಷಿಸುತ್ತ ಸಾಗುತ್ತಿರುವಾಗಲೇ ಈ ಆನಂದವನ್ನು ಮುಚ್ಚುಹಾಕುವತ್ತ ಕೆಲವು ಅಸಹನೆಯಿಂದ ಕೂಡಿರುವ ಶಕ್ತಿಗಳು ಪ್ರಯತ್ನಿಸುತ್ತವೆ. ನಾವು ಚಿಂತಾರಹಿತವಾಗಿ ನಿತ್ಯತೃಪ್ತರಾಗಿದ್ದಾಗಲೇ ಈ ಬದುಕು ಸರಳ. ನಮ್ಮ ಜೀವನವನ್ನು ಮತ್ತೊಬ್ಬ ಜೀವಿಗೆ ಅಡಚಣೆಯಾಗದಂತೆ ಪರರ ಹಿತ ಬಯಸುವುದರಿಂದಲೇ ಈ ಜೀವನದಲ್ಲಿ ಸಫಲತೆ , ಆನಂದ ಪಡೆಯಲು ಸಾಧ್ಯ. ಮನುಷ್ಯ ತನ್ನನ್ನು ತಾನು ವಿಂಗಡಿಸಿಕೊಂಡಿದ್ದಾನೆ . ಮನುಷ್ಯ ಮನುಷ್ಯನಲ್ಲಿ ತಾರತಮ್ಯವನ್ನು ಕಂಡುಹಿಡಿದಿದ್ದಾನೆ. ದೇವರಲ್ಲೂ ತಾರತಮ್ಯ ಸೃಷ್ಟಿಸಿ ದೇವರಲ್ಲಿಯೂ ೧,೨,೩ ಹೀಗೆ ಸ್ಥಾನಗಳನ್ನು ಸೃಷ್ಠಿಸಿದ್ದಾನೆ. ಧರ್ಮದ ಹೆಸರಲ್ಲಿ ಮಾನವೀಯ ಮೌಲ್ಯಗಳನ್ನು ಪಾಲಿಸದೇ ಕ್ರೌರ್ಯದ ಭಾವನೆಗಳ ಜೊತೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾನೆ. ಸಂಘಜೀವಿಯಾಗದೇ "ಸಂಘ"ದ ಜೀವಿಯಾಗಿ ಬದಲಾಗುತ್ತಿರುವ ಮಾನವ ಸೌಮ್ಯತೆಯನ್ನು ಕಳೆದುಕೊಂಡು ಹುಚ್ಚನಾಗಿದ್ದಾನೆ. ’ಶಿಸ್ತು’ ಎನ್ನುವ ಪದ ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಮಾನವನ ದುರಾಸೆ ಮತ್ತು ಅಹಂಕಾರಕ್ಕೆ ಅಲಂಕಾರಗಳಾಗಿದೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ದೇಶದ ಜನ ತುಂಬಾ ಅಭಿಮಾನದಿಂದ ... ಸಾರಿ ..ಪೂರ್ವಾಗ್ರಹದಿಂದ ಆರಿಸಿರುವ ನಾಯಕ ನರೇಂದ್ರ ಮೋದಿ . ಆತನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಈ ದೇಶದ ಜನರನ್ನು ತಂದು ನಿಲ್ಲಿಸಿದ್ದಾನೆ ಮಹಾಪುರುಷ.
ಈತನನ್ನೆ ಏಕೆ ಆಯ್ಕೆ ಮಾಡಿದಿರಿ ಎನ್ನುವ ಪ್ರಶ್ನೆಯನ್ನು ನಮ್ಮ ಜನರಲ್ಲಿಟ್ಟಾಗ ಅವರು ಆಯ್ಕೆಗಳ ಬಗ್ಗೆ ಮಾತನಾಡಿ ಮೋದಿಯನ್ನು ಉತ್ತಮ ಆಯ್ಕೆ ಎನ್ನುತ್ತಾರಲ್ಲದೆ ಜೊತೆಗೆ ರಾಹುಲ್ ಗಾಂಧಿಯನ್ನು ಕತ್ತೆಗೆ ಹೋಲಿಸಿ ಅಮುಲ್ ಬೇಬಿ ಎಂದೆಲ್ಲ ಹಂಗಿಸಿ ಹಾಸ್ಯಮಾಡುತ್ತಾರೆ . ಈ ಜನರಿಗೆಲ್ಲ ಒಂದು ವಿಷಯ ತಿಳಿಯಬೇಕಾಗಿದೆ ಮೂರ್ಖರಾದವರೆಲ್ಲ ಅನುಪಯುಕ್ತರೇನಲ್ಲ . ಒಬ್ಬ ತೀವ್ರವಾದಿಯನ್ನು ಆಯ್ಕೆಮಾಡುವುದಕ್ಕಿಂತ , ಒಬ್ಬ ಸೌಮ್ಯವಾದಿಯನ್ನು ಆಯ್ಕೆಮಾಡುವುದು ಲೇಸಾಗಿತ್ತು .
ಜನರ ಭೌತಿಕ ಅವಶ್ಯಕತೆಗಳಿಗೆ ಒತ್ತು ನೀಡಿ ನಿಧಾನವಾಗಿಯೇ ತಮ್ಮ ಉದ್ದೇಶಗಳನ್ನು ಪೂರ್ಣಗೊಳಿಸುವ ಮೋದಿಯಂತಹ ಆರ್ ಎಸ್ ಎಸ್ ನ ಮಾದರಿ ನಾಯಕ ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯ ಆನಂದವನ್ನು ಕಿತ್ತುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ . ನಾನು ಮೋದಿ ಸರ್ಕಾರದ ಭ್ರಷ್ಟಾಚಾರದ ಕುರಿತಾಗಿಯೋ ಅಥವಾ ಆತನ ಖಾಸಗಿ ವಿಚಾರಗಳ ಕುರಿತಾಗಿಯೋ ಪ್ರಾಮುಖ್ಯತೆ ವಹಿಸದೆ ಆತ ಪ್ರಬುದ್ಧನಾಗಿ ನಟಿಸುತ್ತ ಬುದ್ಧನ ಸಿದ್ಧಾಂತಕ್ಕೆ ಕೊಳ್ಳಿ ಇಡಲು ಹೊರಟಿರುವುದನ್ನು ಖಂಡಿಸುತ್ತೇನೆ . ದಲಿತರನ್ನು , ರೈತರನ್ನು ಷೋಷಿಸಿ , ಬಂಡವಾಳಶಾಹಿಗಳನ್ನು ಪೋಷಿಸುತ್ತಿರುವುದನ್ನು ಈ ದೇಶದ ಅಸಂಖ್ಯಾತ ವಿದ್ಯಾವಂತ-ವಿಚಾರವಂತರು ಖಂಡಿಸದೇ ಇರುವುದರ ಪರಿಣಾಮವನ್ನು ಎದುರಿಸಲೇಬೇಕಾಗುತ್ತದೆ ಎಂಬುದು ನನ್ನ ಕಳವಳ . ನೆನಪಿಡಬೇಕಾದ ಅಂಶವೆಂದರೆ ಈ ದೇಶದ ಚುಕ್ಕಾಣಿ ಹಿಡಿದಿರುವ ಸ್ವಯಂಘೋಷಿತ "ವಿಕಾಸ ಪುರುಷ" , "ಅಭಿವೃದ್ಧಿ ಹರಿಕಾರ" , "ಪವಾಡ ಪುರುಷ" ಈ ದೇಶದ ಯುವಜನರಲ್ಲಿ ಹಗಲು ಕನಸನ್ನು ಸೃಷ್ಟಿಸಿದ್ದಾನೆ. ವಿವೇಕಾನಂದರು "ಏಳಿ ಎದ್ದೇಳಿ " ಎಂದಾಗ ಎದ್ದೇಳದ ನಮ್ಮ ಜನರು ಮೋದಿಯ ಕರೆಗೆ ಓ ಕೊಟ್ಟು ಎದ್ದಿರುವುದನ್ನೆನಾದರೂ ಪ್ರಾಯಶ: ವಿವೇಕಾನಂದರು ನೋಡಿದ್ದರೆ ಮಲಗಿ ಎಂದು ಕರೆ ಕೊಡುತ್ತಿದ್ದರು . ಜನರನ್ನು ಧರ್ಮದ ಮೂಲಕ , ಸುಳ್ಳು ಭರವಸೆ ಮೂಲಕ , ವೇದ -ಶಾಸ್ತ್ರಗಳ ಮೂಲಕ , ಭಾವನಾತ್ಮಕ ಸೆಳೆತದ ಮೂಲಕ ವಂಚಿಸಿ ಆಡಳಿತ ಪಡೆದಿರುವ ಮೋದಿ ಜನರನ್ನು ಆಂತರಿಕವಾಗಿ ನಿಷ್ಕ್ರ್‍ಇಯೆಗೊಳಿಸಿದ್ದಾನೆ. ಯಾವಾಗ ಮನುಷ್ಯನ ಆಂತರಿಕ ಬುದ್ಧಿ ನಿಷ್ಕ್ರ್‍ಇಯವಾಗುತ್ತದೋ , ಆಗ ಕ್ಲೇಶ ಸೃಷ್ಟಿಯಾಗುತ್ತದೆ . ಮೋದಿ ಇಂತಹ ಕ್ಲೇಶವನ್ನು ಸೃಷ್ಟಿಸಿದ್ದಾನೆ. ಆದರೆ , ಜನ ಕ್ಲೇಶಭರಿತರಾದಾಗ ಸೋಲುವುದಿಲ್ಲ , ಈಗೆಲ್ಲ ನಮ್ಮ ಜನ ಇನ್ನೂ ನಿರಾಸೆ ಬಿಡದೆ ಮೋದಿ ಎನೋ ಕಡೆದು ಗುಡ್ಡೆ ಹಾಕುತ್ತಾನೆಂದು ಹರ್ಷಭರಿತರಾಗಿದ್ದಾರಲ್ಲ , ಈಗ ನಮ್ಮ ಜನ ಸೋತಿದ್ದಾರೆ ಮತ್ತು ಮೋದಿ ಗೆದ್ದಿದ್ದಾನೆ . ಒಟ್ಟಿನಲ್ಲಿ ಭಾರತ ಸಂಧಿಗ್ಢತೆ ನೆರಳಿನಲ್ಲಿದೆ.